ದೊಡ್ಮನೆ ಅಥವಾ ‘ಬಿಗ್’ ಮನೆ ಅಂತೆಲ್ಲ ಕರೆಯಿಸಿಕೊಳ್ಳುತ್ತಿದ್ದ ‘ಬಿಗ್ ಬಾಸ್’ ಮನೆಗೆ ಬೆಂಕಿ ಬಿದ್ದಿದೆ. ಅಗ್ನಿ ಅವಘಡದಿಂದ ಬಿಗ್ ಬಾಸ್ ಮನೆ ಧಗಧಗ ಉರಿದಿದೆ.

ಬೆಂಗಳೂರಿನ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಕನ್ನಡ ಮನೆ ನಿರ್ಮಿಸಲಾಗಿತ್ತು, ಇದೇ ಮನೆಯಲ್ಲೇ ಕಳೆದ ಮೂರು ಬಿಗ್ ಬಾಸ್ ಸೀಸನ್ ಗಳು ನಡೆದಿತ್ತು ಆದರೆ ಇದೀಗ ಅದೇ ಮನೆ ಸುಟ್ಟು ಕರಕಲಾಗಿದೆ.

ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದ್ದ ಪ್ರತಿ ಸೀಸನ್ ಗೂ ಮರು ನವೀಕರಣಗೊಳ್ಳುತ್ತಿದ್ದ ಬಿಗ್ ಬಾಸ್ ಮನೆ ಸದ್ಯ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಹೊತ್ತಿ ಉರಿದ ‘ಬಿಗ್ ಬಾಸ್’ ಮನೆ
‘ಬಿಗ್ ಬಾಸ್’ ಮನೆಯಲ್ಲಿ ಬೆಂಕಿ ಅವಘಡ

ಮುಂಜಾನೆ ಮೂರು ಗಂಟೆ ಹೊತ್ತಿಗೆ ಬಿಗ್ ಬಾಸ್ ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬಿಗ್ ಬಾಸ್ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಬಿಗ್ ಬಾಸ್ ಮನೆ ಜೊತೆಗೆ ಪಕ್ಕದಲ್ಲಿ ಇದ್ದ ಮೂರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮೇಣದ ಮ್ಯೂಸಿಯಂ ಕೂಡ ಸಂಪೂರ್ಣವಾಗಿ ಭಸ್ಮ ಆಗಿದೆ.ಇನ್ನೂ ಬೆಂಕಿ ಆರಿಲ್ಲ ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಹರಸಾಹಸ

ಬಿಗ್ ಬಾಸ್ ಮನೆಯಲ್ಲಿ ಆವರಿಸಿರುವ ಬೆಂಕಿ ನಂದಿಸಲು 11 ಅಗ್ನಿಶಾಮಕ ವಾಹನಗಳಿಂದ ಹರಸಾಹಸ ಪಡಲಾಗುತ್ತಿದೆ. ಆದರೂ, ಬೆಂಕಿ ನಂದಿಸಲು ಇನ್ನೂ ಸಾಧ್ಯವಾಗಿಲ್ಲ.

ಏನೂ ಉಳಿದಿಲ್ಲ
ಸುಟ್ಟು ಕರಕಲಾಗಿದೆ

ಬಿಗ್ ಬಾಸ್ ಮನೆಯ ಒಳಭಾಗಕ್ಕೂ ಬೆಂಕಿ ಆವರಿಸಿರುವುದರಿಂದ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ, ಅದಾಗಲೇ ಮುಕ್ಕಾಲು ಭಾಗದಷ್ಟು ಬಿಗ್ ಬಾಸ್ ಮನೆ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.

ಕಲರ್ಸ್ ವಾಹಿನಿಗೆ ನಷ್ಟ
ಕೋಟ್ಯಾಂತರ ರೂಪಾಯಿ ನಷ್ಟ

ಬೆಂಕಿ ಅವಘಡದಿಂದಾಗಿ ಕಲರ್ಸ್ ವಾಹಿನಿ ಹಾಗೂ ಬಿಗ್ ಬಾಸ್ ನಡೆಸುವ ಎಂಡೆಮಾಲ್ ಸಂಸ್ಥೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

ಈ ಮನೆಯಲ್ಲಿ ಕಿಚ್ಚಿದೆ ಹುಚ್ಚಿದೆ ಮನಸಲ್ಲೇ ಮಡಗಿರುವ ಮಚ್ಚಿದೆ ಕಾಡ್ಗಿಚ್ಚಿದೆ  ಇದು ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆ ಮಾಡುವಾಗ ಕಿಚ್ಚ ಸುದೀಪ್ ಬಾಯಲ್ಲಿ ಬರುವ ಮಾತು.

ಹೇಳಿ ಕೇಳಿ ಬಿಗ್ ಬಾಸ್ ಒಂದು ರಿಯಾಲಿಟಿ ಶೋ ಹೀಗಾಗಿ ಸ್ಪರ್ಧಿಗಳ ನಡುವೆ ಕಿಚ್ಚು ಹುಚ್ಚು ಮಚ್ಚು ಕಾಡ್ಗಿಚ್ಚು ಎಲ್ಲವೂ ಕಾಮನ್. ಆದರೆ ಈಗ  ರಿಯಾಲಿಟಿ ಶೋ ಮುಗಿದು ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ಮೇಲೆ ನಿಜವಾದ ಕಿಚ್ಚು ಹತ್ಕೊಂಡ್ಬಿಟ್ಟಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಮೊದಲೆರಡು ಸೀಸನ್ ಗಳು ನಡೆದಿದ್ದು ಪೂಣೆಯ ಲೋನಾವಾಲದಲ್ಲಿ,ಸಿನಿಮಾ ಶೂಟಿಂಗ್ ಮತ್ತು ಸಿಸಿಎಲ್ ನಡುವೆ ‘ಬಿಗ್ ಬಾಸ್’ ಕೂಡ ನಡೆಸಿಕೊಡುತ್ತಿದ್ದ ಕಿಚ್ಚ ಸುದೀಪ್ ಗೆ ವೀಕೆಂಡ್ ಬಂತೂಂದ್ರೆ ನಿದ್ದೆಯೇ ಇರ್ತಿರ್ಲಿಲ್ಲ, ಕಾರಣ ಇದೇ ಬಿಗ್ ಬಾಸ್.

ಪ್ರತಿ ವಾರ ಸುದೀಪ್ ಪೂಣೆಗೆ ಹೋಗಿ ಎರಡು ಎಪಿಸೋಡ್ ಮುಗಿಸಿಕೊಟ್ಟು ಬರಬೇಕಿತ್ತು. ನಿದ್ದೆ ಇಲ್ಲದೆ ಕಷ್ಟ ಪಟ್ಟು ಸುದೀಪ್ ಎರಡು ಸೀಸನ್ ಗಳನ್ನ ನಡೆಸಿಕೊಟ್ಟ ಮೇಲೆ ಕಲರ್ಸ್ ವಾಹಿನಿ ಮತ್ತು ಎಂಡೆಮಾಲ್ ಒಂದು ನಿರ್ಣಯಕ್ಕೆ ಬಂತು, ಅದೇ ಬಿಗ್ ಬಾಸ್ ಮನೆಯನ್ನ ಬೆಂಗಳೂರಿಗೆ ಶಿಫ್ಟ್ ಮಾಡುವುದು.

ಬಿಗ್ ಬಾಸ್ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವುದೇ ಭಾಷೆಯಲ್ಲಿ ಬಿಗ್ ಬಾಸ್ ಮನೆ ಶಿಫ್ಟ್ ಆಗಿಲ್ಲ ಆದ್ರೆ ಬಿಗ್ ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಸಿಕ್ಕ ಜನಪ್ರಿಯತೆ ಹಾಗೂ ಕಿಚ್ಚನಿಗಾಗಿ ಬಿಗ್ ಮನೆಯನ್ನ ಬೆಂಗಳೂರಿಗೆ ಶಿಫ್ಟ್ ಮಾಡಲಾಯಿತು. ಈಗ ಅದೇ ಮನೆಗೆ ಕಿಚ್ಚು ಬಿದ್ದಿರುವುದು ದುರಂತವೇ ಸರಿ.

ಅತಿ ದೊಡ್ಡ ಮನೆ
ಬಿಡದಿಯಲ್ಲಿ ಇತ್ತು ಭವ್ಯವಾದ ಬಿಗ್ ಬಾಸ್ ಮನೆ

ಬಿಗ್ ಬಾಸ್ ಮನೆ ಭವ್ಯವಾಗಿ ತಲೆಯೆತ್ತಿದ್ದು ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ 14,000 ಚದರ ಅಡಿಗಳಲ್ಲಿ ಕನ್ನಡ ಬಿಗ್ ಬಾಸ್ ಮನೆ ನಿರ್ಮಿಸಲಾಗಿತ್ತು, ಇದು ಹಿಂದಿನ ಬಿಗ್ ಬಾಸ್ ಮನೆಗಿಂತಲೂ ವಿಶಾಲವಾದದ್ದು.

ಇದೇ ಮನೆಯಲ್ಲಿ ಮೂರು ಸೀಸನ್
ಎರಡು ಬಾರಿ ನವೀಕರಣಗೊಂಡಿದೆ

ಇನ್ನೋವೇಟಿವ್ ಫಿಲ್ಮ್ ಸಿಟಿಯ ಬಿಗ್ ಬಾಸ್ ಕನ್ನಡ ಮನೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದಿದ್ದು ಬಿಗ್ ಬಾಸ್ ಕನ್ನಡ-3 ಕಾರ್ಯಕ್ರಮ. ಬಿಗ್ ಬಾಸ್ ಕನ್ನಡ-4 ಹಾಗೂ ಬಿಗ್ ಬಾಸ್ ಕನ್ನಡ-5 ಕಾರ್ಯಕ್ರಮಕ್ಕಾಗಿ ಇದೇ ಮನೆ ಎರಡು ಬಾರಿ ನವೀಕರಣಗೊಂಡಿತ್ತು.

ಮನೆ ನಿರ್ಮಾಣಕ್ಕೆ ಕೋಟಿ ಹಣ
ಕೋಟ್ಯಾಂತರ ರೂಪಾಯಿ ಖರ್ಚು

ಕನ್ನಡದ ಬಿಗ್ ಬಾಸ್ ಮನೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿತ್ತು ಸ್ವಿಮ್ಮಿಂಗ್ ಪೂಲ್ ಜಿಮ್ ಆಧುನಿಕ ಉಪಕರಣ ಪೀಠೋಪಕರಣ ಹೊಂದಿದ್ದ ಬಿಗ್ ಬಾಸ್ ಮನೆ ಇಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿ ಆಗಿದೆ.

ಸಾರ್ವಜನಿಕರಿಗೆ ಪ್ರವೇಶ ಇತ್ತು
ಬಿಗ್ ಬಾಸ್ ಟೂರ್ ನಡೆಯುತ್ತಿತ್ತು

ಬಿಗ್ ಬಾಸ್ ಕನ್ನಡ5 ಕಾರ್ಯಕ್ರಮ ಮುಗಿದ್ಮೇಲೆ ಇದೇ ಮನೆಯಲ್ಲಿ ಇಡೀ ಬಿಗ್ ಬಾಸ್ ತಂಡ ಪಾರ್ಟಿ ಮಾಡಿತ್ತು ಅದಾದ ಬಳಿಕ ಸಾರ್ವಜನಿಕರಿಗೆ ಬಿಗ್ ಬಾಸ್ ಟೂರ್ ಮೂಲಕ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಕಲ್ಪಿಸಲಾಗಿತ್ತು, ಹೀಗಿರುವಾಗಲೇ ಬಿಗ್ ಬಾಸ್ ಮನೆಗೆ ಬೆಂಕಿ ಬಿದ್ದಿದೆ.

ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಅಗ್ನಿ ದುರಂತ ನಡೆದಿದೆ. ಕಿಚ್ಚ ಸುದೀಪ್ ಕಷ್ಟ ಪಟ್ಟು ಬೆಂಗಳೂರಿಗೆ ತರಿಸಿದ್ದ ಈ ಮನೆ ಸುಟ್ಟು ಹೋಗಿರುವುದು ತುಂಬಾ ಬೇಸರದ ವಿಷಯ!

ಸುದ್ಧಿ ಕೃಪೆ ಫಿಲ್ಮಿ ಬೀಟ್

 

LEAVE A REPLY

Please enter your comment!
Please enter your name here