ಅಂಚೆ ಎನ್ನುವ ಹೆಸರು ಹೇಗೆ ಬಂತು ಗೊತ್ತೇ?

1
251

ಪ್ರಸ್ತುತದ ಕನ್ನಡ ಭಾಷೆಯಲ್ಲಿ “ಅಂಚೆ” ಎಂದರೆ Postal, ಟಪಾಲು ಎಂಬ ಅರ್ಥವಿದೆ. ಕನ್ನಡ ಪಂಡಿತರ ಅಥವಾ ನಿಘಂಟುಗಳ ಮೊರೆ ಹೋದರೆ “ಅಂಚೆ” ಎಂಬ ಪದಕ್ಕೆ ‘ಹಂಸ’ ಎಂಬ ಅರ್ಥ ಸಿಗುತ್ತದೆ. ಹಂಸ ನೀರಿನಲ್ಲಿರುವ ಬಾತುಕೋಳಿಯ ಇನ್ನೊಂದು ಹೆಸರು. ಆದರೆ, ಟಪಾಲು/Postal ವಿಭಾಗಕ್ಕೆ ‘ಅಂಚೆ’ ಎಂಬ ಹೆಸರು ಹೇಗೆ ಬಂತೆಂಬುದರ ಹಿಂದೆ ಸ್ವಾರಸ್ಯಕರ ಸಂಗತಿ ಒಂದಿದೆ.

ಹೌದು, ಕ್ರಿ. ಶ. 1672 ರವರೆಗೆ ‘ಅಂಚೆ’ ಎಂಬುದರ ಅರ್ಥ ‘ಹಂಸ’ ಮಾತ್ರ. ಅಂದಿಗೆ ಕನ್ನಡ ನಾಡು (ಕನ್ನಡ ಮಾತನಾಡುವ ರಾಜ್ಯ) ಎನಿಸಿಕೊಂಡಿದ್ದ ಮೈಸೂರು ಸಂಸ್ಥಾನದ ದೊರೆಗಳಾದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ರಾಜ್ಯದ Postal Department/ಟಪಾಲು ವಿಭಾಗವನ್ನು ಸ್ಥಾಪಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು.

ಈ ವಿಭಾಗಕ್ಕೆ ಹೆಸರೇನಿಡಬೇಕೆಂಬ ವಿಚಾರ ಬಂದಾಗ ಅವರ ತಲೆಗೆ ಹೊಳೆದದ್ದು ನಮ್ಮ ಪುರಾಣಗಳಲ್ಲಿ ಅಮರ ಪ್ರೇಮಿಗಳೆನಿಸಿಕೊಂಡ ನಳ-ದಮಯಂತಿಯರು. ಈ ಪ್ರೇಮಿಗಳ ನಡುವೆ ಪ್ರೀತಿಯ ಸಂಕೇತ ಹಾಗೂ ಸಂದೇಶ ವಾಹಕವಾಗಿದ್ದ ‘ಹಂಸೆ’ ಅಥವಾ ‘ಅಂಚೆ’ ಯನ್ನು ಮೈಸೂರು ರಾಜ್ಯದ Postal ವಿಭಾಗದ ಹೆಸರಾಗಿ ಆಯ್ಕೆ ಮಾಡಲಾಯಿತು. ಹೀಗೆ ಅಂದು ನಾಮಕರಣಗೊಂಡ ‘ಅಂಚೆ ವಿಭಾಗ’ ಕನ್ನಡದಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿದೆ. ಅಬ್ಬಾ!! ರಾಜ್ಯದ ವ್ಯವಸ್ಥೆಯ ಒಂದು ವಿಭಾಗಕ್ಕೆ ಎಂತಹ ರೋಮಾಂಚನೀಯ, ಭಾವನಾತ್ಮಕ ಹೆಸರು!!

ಒಂದು ಸ್ಥಳವಾಗಲಿ, ರಸ್ತೆಯಾಗಲಿ, ಯೋಜನೆಯಾಗಲಿ ಅಥವಾ ವ್ಯವಸ್ಥೆಯ ವಿಭಾಗವಾಗಲಿ, ಹೆಸರಿಡುವುದರಲ್ಲಿ ಎಷ್ಟು ಸೃಜನಶೀಲ ಹಾಗೂ ಭಾವನಾತ್ಮಕವಾಗಿರಬೇಕೆಂಬುದಕ್ಕೆ ಇದು ಒಳ್ಳೆಯ ಉದಾಹರಣೆ.

ಈ ವಿಷಯವನ್ನು ನಾನು ಓದುತ್ತಿರುವಾಗ, 10ನೇ ತರಗತಿಯಲ್ಲಿ ಕನ್ನಡದ ಮೇಷ್ಟ್ರು ಹೇಳಿಕೊಟ್ಟ ತತ್ಸಮ-ತದ್ಭವ ಪಾಠಗಳು ನೆನಪಾದವು. ‘ಹಂಸ’ ಎಂಬುದು ಸಂಸ್ಕ್ರತ ಪದ. ರೂಪಾಂತರಗೊಂಡು ಕನ್ನಡಕ್ಕೆ ಬಂದಾಗ ‘ಅಂಚೆ’ಯಾಯಿತು.

ವ್ಯವಸ್ಥೆಯ ಒಂದು ವಿಭಾಗಕ್ಕೆ ಅದನ್ನು ಹೆಸರಾಗಿ ಬಳಸಿಕೊಂಡಾಗ ಕಾಲಕ್ರಮೇಣ ಮೂಲ ಅರ್ಥವೇ ಕಳೆದು ಹೊಸ ಅರ್ಥ ಬಂದಂತಿದೆ. ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ಭಾಷೆಯ ಮೇಲೆ ಬೀರುವ ಪರಿಣಾಮಗಳಿಗೆ ‘ಅಂಚೆ’ ಕೈಗನ್ನಡಿಯಂತಿದೆ. ಇದೇ ಅಲ್ಲವೇ ಭಾಷೆಯ ವಿಕಸನ!

ಶ್ರುತಿ ಹೆಚ್.ಎಂ

1 COMMENT

  1. ಅಂಚೆ ಎಂದರೆ ಹಂಸ ಎನ್ನುವುದೇ ತಿಳಿದಿರಲಿಲ್ಲ!! ಸ್ವಾರಸ್ಯಕರ ಮಾಹಿತಿ ಬರಹ!

LEAVE A REPLY

Please enter your comment!
Please enter your name here