ಮೈತ್ರಿ ಸರಕಾರಗಳಿಗೆ ಏಕೆ ಆಯುಷ್ಯ ಕಡಿಮೆ? ನೀವು ಬೇಕಾದರೆ ಗಮನಿಸಿ ನೋಡಿ, ಮೈತ್ರಿಯಾಗಿ ರೂಪುಗೊಂಡ ಸರಕಾರ ಪೂರ್ಣಾವಧಿ ಕಾಣುವುದು ತುಂಬ ವಿರಳ ಸನ್ನಿವೇಶಗಳಲ್ಲಿ. ಈಗ ಕರ್ನಾಟಕದ ಪರಿಸ್ಥಿತಿಯ ಬಗ್ಗೆ ಹೇಳುವುದಾದರೆ, ಬಹುಮತ ಸಾಬೀತು ಪಡಿಸಿದ ನಂತರದ ಕೆಲ ದಿನಗಳು ಕಳೆದರೂ ಸಂಪುಟ ರಚನೆಯ ಬಿಕ್ಕಟ್ಟು ಬಗೆಹರಿದಿಲ್ಲ.

ದೋಸ್ತಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ ಹೊರತುಪಡಿಸಿದರೆ ಮತ್ತ್ಯಾವ ಮಾಹಿತಿಯೂ ಈಚೆಗೆ ಬಂದಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಯಾರಿಗೆ ಯಾವ ಸಚಿವ ಸ್ಥಾನ ಸಿಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

ಆ ಪೈಕಿ ನಿಜವೆಷ್ಟೋ ಗಾಳಿಪಟವೆಷ್ಟೋ ಇನ್ನಷ್ಟೇ ಗೊತ್ತಾಗಬೇಕಿದೆ.ಬಹುತೇಕ ಸಂದರ್ಭಗಳಲ್ಲಿ ಸಮಾನ ಮನಸ್ಕ ಪಕ್ಷಗಳೇ ಮೈತ್ರಿಗೆ ಮುಂದಾಗುತ್ತವೆ.ಅಂದರೆ ಸೈದ್ಧಾಂತಿಕವಾಗಿ ಹಾಗೂ ಮತ ಬ್ಯಾಂಕ್ ದೃಷ್ಟಿಯಿಂದಲೂ ಮೈತ್ರಿಯೊಳಗಿನ ಪಕ್ಷಗಳ ಕಣ್ಣು ಒಂದೇ ಕಡೆ ನೆಟ್ಟಿರುತ್ತವೆ.

ಎಲ್ಲೋ ಅಪರೂಪದಲ್ಲಿ ಜಮ್ಮು- ಕಾಶ್ಮೀರದಲ್ಲಿ ಆದಂತೆ ಪಿಡಿಪಿ- ಬಿಜೆಪಿ ಎಂಬ ಎರಡು ವಿರುದ್ಧ ದಿಕ್ಕುಗಳು ಒಂದಾಗುತ್ತವೆ. ಒಟ್ಟಿಗೆ ಸರಕಾರ ಮಾಡುತ್ತವೆ.ಈಗ ಮತ್ತೆ ವಿಷಯದ ಆರಂಭಕ್ಕೆ ಬರೋಣ, ಮೈತ್ರಿ ಸರಕಾರಗಳಿಗೆ ಏಕೆ ಆಯುಷ್ಯ ಕಡಿಮೆ? ಇಲ್ಲಿವೆ ಕಾರಣಗಳು…

ಕ್ಷೇತ್ರವಾರು ಮಟ್ಟದಲ್ಲಿ ಅಸ್ತಿತ್ವದ ಪ್ರಶ್ನೆ
ಪದೇ ಪದೇ ತಿಕ್ಕಾಟಕ್ಕೆ ಕಾರಣವಾಗುತ್ತವೆ

ಏನೇ ಮೈತ್ರಿ ಸರಕಾರ ಅಂದರೂ ಪ್ರಮುಖ ಸಚಿವ ಸ್ಥಾನಗಳು ಹಾಗೂ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿ ಸ್ಥಾನಗಳು ನಿರ್ಧಾರಿತ ಪಾತ್ರ ವಹಿಸುತ್ತವೆ.ಸರಕಾರ ರಚನೆಯಾದ ನಂತರ ಆಯಾ ಕ್ಷೇತ್ರವಾರು ಮಟ್ಟದಲ್ಲಿ ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯ ಇರುತ್ತದೆ.ಉದಾಹರಣೆಗೆ ತುಮಕೂರಿನ ಮಧುಗಿರಿ ವಿಧಾನಸಭಾ ಕ್ಷೇತ್ರ. ಅಲ್ಲಿ ಈ ಬಾರಿ ಗೆದ್ದಿರುವವರು ಎಚ್.ವಿ.ವೀರಭದ್ರಯ್ಯ.

ಈ ಹಿಂದೆ ಶಾಸಕರಾಗಿದ್ದವರು ಕಾಂಗ್ರೆಸ್ ನ ಕೆ.ಎನ್.ರಾಜಣ್ಣ. ಇಬ್ಬರ ಮಧ್ಯ ಹಸಿ ಹುಲ್ಲು ಬಿದ್ದರೂ ಧಗ್ಗನೆ ಹೊತ್ತಿ ಉರಿಯುವಂಥ ದ್ವೇಷ ಇದೆ.ಶಿರಾದಲ್ಲೂ ಹಾಗೆ.ಅಲ್ಲಿ ಈ ಬಾರಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಿರುವುದು ಜೆಡಿಎಸ್ ನ ಬಿ.ಸತ್ಯನಾರಾಯಣ.

ಸ್ಥಳೀಯ ಮಟ್ಟದ ಕೆಲಸಗಳ ಬಗ್ಗೆ ಸರಕಾರವನ್ನು ಜಯಚಂದ್ರ ಅವರು ಟೀಕಿಸುವಾಗ ಎಚ್ಚರದಿಂದ ಇರಬೇಕು. ಇಂಥ ಸ್ಥಿತಿ ರಾಜ್ಯದ ಹಲವಾರು ಕ್ಷೇತ್ರದಲ್ಲಿವೆ. ಇನ್ನು ಸ್ಥಳೀಯ ನಾಯಕರು, ಮುಖಂಡರ ಹೇಳಿಕೆಗಳು, ಸರಕಾರದ ಮಟ್ಟದಲ್ಲಿನ ತೀರ್ಮಾನದ ನಂತರ ಅಭಿಪ್ರಾಯಗಳು ಪದೇಪದೇ ತಿಕ್ಕಾಟಕ್ಕೆ ಕಾರಣವಾಗುತ್ತವೆ.

ದೋಸ್ತಿಯೋ ಕುಸ್ತಿಯೋ
ಇತರ ಚುನಾವಣೆಗಳ ಕಥೆ ಏನು?

ವಿಧಾನಸಭೆ ಚುನಾವಣೆ ನಂತರ ಉಪ ಚುನಾವಣೆಗಳು, ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ, ಸ್ಥಳೀಯ ಸಂಸ್ಥೆಗಳಲ್ಲಿನ ಚುನಾವಣೆಗಳಲ್ಲಿ ಮೈತ್ರಿ ಸರಕಾರದೊಳಗಿನ ಪಕ್ಷಗಳು ಜನರ ಮುಂದೆ ಖಾರವಾದ ಟೀಕೆಗಳನ್ನು ಮಾಡುವಾಗ ಮುಜುಗರಕ್ಕೆ ಈಡಾಗಬೇಕಾಗುತ್ತದೆ.

ಈ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿದರೆ ಎಲ್ಲಿ- ಯಾರಿಗೆ ಸ್ಥಾನ ಬಿಟ್ಟುಕೊಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಸರಕಾರದ ಸಾಧನೆ ಯಾವ ಪಕ್ಷದ ಪಾಲು ಎಂಬ ಚರ್ಚೆಗೆ ಕಾರಣವಾಗುತ್ತದೆ. ಫಲಿತಾಂಶ ಬಂದ ನಂತರ ಒಂದು ಪಕ್ಷವು ಅದ್ಭುತ ಸಾಧನೆ ಮಾಡಿ,ಮತ್ತೊಂದು ನೆಲ ಕಚ್ಚಿದರೆ ಕುಸ್ತಿ ಶುರು ಆಗುತ್ತದೆ.

ಮಾನಸಿಕ ಒಮ್ಮತ ಮೂಡುವುದು ಕಷ್ಟ
ಸರಕಾರ ಬಿದ್ದುಹೋಗಲಿ ಎಂದು ಬಯಸುವ ಗುಂಪೊಂದು ಇರುತ್ತದೆ

ಸಮ್ಮಿಶ್ರ ಸರಕಾರ ಎಂಬುದು ಎರಡು ಅಥವಾ ಅದಕ್ಕಿಂತ ಹೆಚ್ಚು ಪಕ್ಷಗಳ ನಾಯಕರು ಹಾಗೂ ಮುಖಂಡರು ಮಾನಸಿಕ ಒಮ್ಮತ. ಒಂದೇ ಪಕ್ಷದಲ್ಲಿ ಇದ್ದುಕೊಂಡೇ ಆ ರೀತಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಕಷ್ಟ.

ಇನ್ನು ಮೈತ್ರಿ ಸರಕಾರ ಬಿದ್ದುಹೋಗಲಿ ಎಂದು ಬಯಸುವ ಗುಂಪು ಸಣ್ಣ-ಪುಟ್ಟ ಅಸಮಾಧಾನವನ್ನೂ ದೊಡ್ಡದು ಮಾಡಿ,ರಂಕಲು ಆಗುವಂತೆ ಬೆಂಕಿ ಹೊತ್ತಿಸಿ, ದೂರವಾಗುವಂತೆ ಮಾಡಲು ಪುಟ್ಟ ಗುಂಪಾದರೂ ಹವಣಿಸುತ್ತಿರುತ್ತದೆ.

ಯಾವ ಭಿನ್ನಾಭಿಪ್ರಾಯದ ಸಂದರ್ಭವೂ ಬಿರುಕು ದೊಡ್ಡದಾಗಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ನಿಗಮ- ಮಂಡಳಿಗಳ ನೇಮಕದಂಥ ಸನ್ನಿವೇಶದಲ್ಲೇ ಅಸಮಾಧಾನ ಭುಗಿಲೇಳುತ್ತದೆ.

ದಿಢೀರ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ
ಜನರ ಕಣ್ಣಿನಲ್ಲಿ ಖಳನಾಯಕರನ್ನಾಗಿ ಮಾಡುವ ಯತ್ನ

ಎರಡು ಪಕ್ಷಗಳು ಸೇರಿ ಸರಕಾರ ನಡೆಸುವಾಗ ಬಹುತೇಕ ಸಂದರ್ಭಗಳಲ್ಲಿ ಇನ್ನೇನು ಚುನಾವಣೆಗೆ ತೆರಳಬೇಕು ಎಂಬ ಸನ್ನಿವೇಶದಲ್ಲಿ ಒಬ್ಬರು ಮತ್ತೊಬ್ಬರನ್ನು ಜನರ ಕಣ್ಣಿನಲ್ಲಿ ಖಳನಾಯಕರಂತೆ ಬಿಂಬಿಸಲು ಯತ್ನಿಸುವುದು ಕಂಡುಬರುತ್ತದೆ.

ನಮ್ಮ ಪಕ್ಷದ ಸರ್ವನಾಶಕ್ಕೆ ಯತ್ನಿಸಿದರು, ನಮಗೆ ಗೌರವ ಕೊಡುತ್ತಿರಲಿಲ್ಲ, ನಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ, ನಮ್ಮ ರೀತಿಯಲ್ಲಿ ಜನಪರ ಆಲೋಚನೆ ಇರಲಿಲ್ಲ… ನೀವು ಗಮನಿಸಿ ನೋಡಿದರೆ, ದೋಸ್ತಿ ಮುರಿದುಕೊಳ್ಳುವ ವೇಳೆ ಬಹುತೇಕರು ನೀಡುವ ಕಾರಣಗಳೇ ಇವು.

ಕೃಪೆ : ಡೈಲಿ ಹಂಟ್

LEAVE A REPLY

Please enter your comment!
Please enter your name here