ಸಾಮಾನ್ಯವಾಗಿ ಅಡುಗೆಗಳಲ್ಲಿ ಬಳಕೆಯಾಗುವ ಸೋಡಾ ಎಲ್ಲರಿಗೂ ಗೊತ್ತೇ ಇದೆ.ಆದರೆ ಇದೊಂದು ಮನೆಮದ್ದು ಎಂಬುದು ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ.ದೋಸೆ ಇಡ್ಲಿಗಳ ಹಿಟ್ಟನ್ನು ಉಬ್ಬಿಸಲು ಸೇರಿದಂತೆ ಇನ್ನಿತರ ಪದಾರ್ಥಗಳ ತಯಾರಿ ಮಾಡುವಾಗ ಬಳಸಲಾಗುತ್ತದೆ.ಸದಾ ಮನೆಯ ಪುಟ್ಟ ಡಬ್ಬಗಳಲ್ಲಿ ಸ್ಥಾನ ಪಡೆದಿರುವ ಅಡುಗೆ ಸೋಡಾ ಎಲ್ಲ ದಿನಗಳಲ್ಲೂ ಬಳಕೆಯಾಗದಿದ್ದರೂ ಕೆಲವೊಂದು ಪದಾರ್ಥಗಳನ್ನು ತಯಾರಿಸುವಾಗ ಮಾತ್ರ ಇದರ ನೆನಪಾಗುತ್ತದೆ.

ಹಾಗೆ ನೋಡಿದರೆ ಅಡುಗೆ ಸೋಡಾ ಕೇವಲ ಅಡುಗೆಗೆ ಮಾತ್ರ ಬಳಕೆಯಾಗದೆ ಮನೆಮದ್ದಾಗಿ ಹಲವು ಸಂದರ್ಭಗಳಲ್ಲಿ ನಮಗೆ ಉಪಯೋಗಕ್ಕೆ ಬರುತ್ತದೆ. ಜೊತೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಇದಕ್ಕೆ ಕಾರಣ ಇದರಲ್ಲಿರುವ ಕ್ಷಾರೀಯ ಗುಣವಾಗಿದೆ. ಅಡುಗೆ ಸೋಡಾಗೆ ನಮ್ಮ ದೇಹದಲ್ಲಿರುವ ಆಮ್ಲೀಯತೆಯನ್ನು ನಿಯಂತ್ರಿಸುವ ಶಕ್ತಿಯಿದೆ.ಹೀಗಾಗಿ ನಮ್ಮ ನಿತ್ಯದ ಅಡುಗೆ ಪದಾರ್ಥಗಳಲ್ಲಿ ಅದರಲ್ಲೂ ದೋಸೆ ಇಡ್ಲಿಗಳ ತಯಾರಿಯಲ್ಲಿ ಇದರ ಕೊಡುಗೆ ಬಹಳಷ್ಟಿದೆ ಎನ್ನಬಹುದು.

ಇನ್ನು ನಾವು ಅಡುಗೆ ಸೋಡಾದಿಂದ ನಮಗೇನು ಪ್ರಯೋಜನವಿದೆ ಎಂಬುವುದನ್ನು ನೋಡುವುದಾದರೆ ಚಿಟಿಕೆ ಸೋಡಾದಿಂದ ಹಲವು ರೀತಿಯ ಪ್ರಯೋಜನಗಳಿರುವುದನ್ನು ಕಾಣಬಹುದಾಗಿದೆ.

ಮುಖದ ಸೌಂದರ್ಯ ಕಾಪಾಡುವ ಗುಣವೂ ಇದರಲ್ಲಿ ಇದೆಯಂತೆ. ಕಾಲಿನ ಹಿಮ್ಮಡಿ ಒಡೆದು ಧೂಳು ಸೇರಿದಂತೆ ಮಣ್ಣು ಸೇರಿಕೊಂಡು ಕಪ್ಪಗಾಗಿ ಅಸಹ್ಯ ಎನಿಸಿದರೆ ಅಡುಗೆ ಸೋಡಾದಿಂದ ತೊಳೆಯಬಹುದು ಕಾರಣ ತ್ವಚೆಯನ್ನು ಕಾಪಾಡುವ ಗುಣ ಇದಕ್ಕಿದೆಯಂತೆ.

ಕೆಲವೊಮ್ಮೆ ಆಮ್ಲೀಯತೆಯ ಪರಿಣಾಮದಿಂದಾಗಿ ದೇಹದಲ್ಲಿ ಎದೆಯುರಿ, ವಾಕರಿಕೆ ಅಥವಾ ಹೊಟ್ಟೆಯುಬ್ಬರ ಕಂಡು ಬಂದರೆ ಅದರ ನಿವಾರಣೆಗೆ ಅಡುಗೆ ಸೋಡಾ ಬಳಸಬಹುದು.ಅದು ಹೇಗೆಂದರೆ ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ ಚಿಟಿಕೆಯಷ್ಟು ಅಡುಗೆ ಸೋಡಾ ಬೆರೆಸಿ ಗಟಗಟನೇ ಕುಡಿದು ಬಿಡಬೇಕು.

ಅದು ಹೊಟ್ಟೆಗೆ ಸೇರಿ ಆಮ್ಲೀಯತೆಯಿಂದ ಉಂಟಾಗಿದ್ದ ತೊಂದರೆಯನ್ನು ನಿವಾರಿಸಿ ರಿಲ್ಯಾಕ್ಸ್ ನೀಡುತ್ತದೆ.ಬಾಯಿಯ ದುರ್ವಾಸನೆ,ಹಲ್ಲುನೋವು,ವಸಡುಗಳಲ್ಲಿ ಸೋಂಕು ಇವು ಸಾಮಾನ್ಯವಾಗಿ ಮನುಷ್ಯನನ್ನು ಕಾಡುತ್ತಲೇ ಇರುತ್ತದೆ.

ಆದರೆ ಬಾಯಿಯ ದುರ್ವಾಸನೆ ಬೇರೆಯವರಿಗೆ ಮುಜುಗರ ತರುತ್ತದೆ.ಇದನ್ನು ಹೋಗಲಾಡಿಸಲು ಕೂಡ ಅಡುಗೆ ಸೋಡಾವನ್ನು ಬಳಸಬಹುದಾಗಿದೆ.ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕಚಮಚ ಅಡುಗೆ ಸೋಡಾ ಹಾಕಿ ಚೆನ್ನಾಗಿ ಬೆರೆಸಿ ಆ ನೀರಿನಿಂದ ಬಾಯಿಯನ್ನು ದಿನಕ್ಕೆ ಒಂದೋ ಎರಡೋ ಬಾರಿ ಚೆನ್ನಾಗಿ ಮುಕ್ಕಳಿಸಿ ತೊಳೆಯುತ್ತಾ ಬಂದರೆ ಬಾಯಿಯಲ್ಲಿ ಉಂಟಾಗಿದ್ದ ಸೋಂಕು ಮಾತ್ರವಲ್ಲದೆ ದುರ್ವಾಸನೆಗೂ ಮುಕ್ತಿ ದೊರಕುತ್ತದೆ.

ಇದೆಲ್ಲದರ ನಡುವೆ ಒಂದು ದೊಡ್ಡ ಲೋಟ ನೀರಿನಲ್ಲಿ ಚಿಟಿಕೆಯಷ್ಟು ಅಡುಗೆ ಸೋಡಾ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಜತೆಗೆ ಅಜೀರ್ಣ ಮತ್ತು ಇತರ ಕರುಳು ಸಂಬಂಧಿತ ತೊಂದರೆಗಳಿಗೆ ಒಳಗಾಗದಂತೆ ನೋಡಿಕೊಳ್ಳುವ ಶಕ್ತಿಹೆಚ್ಚಾಗುತ್ತದೆಯಂತೆ.

ಉರಿಮೂತ್ರ, ಮೂತ್ರನಾಳದ ಸೋಂಕು ಕಂಡು ಬಂದರೆ ನಾಲ್ಕು ಲೋಟ ನೀರಿಗೆ ಒಂದು ಚಮಚ ಅಡುಗೆ ಸೋಡಾ ಹಾಕಿ ನೀರನ್ನು ಶೇಖರಿಸಿಟ್ಟುಕೊಂಡು ಸ್ವಲ್ಪ ಸ್ವಲ್ಪವೇ ಕುಡಿದು ವಾರದಲ್ಲಿ ಮುಗಿಸಬೇಕು ಹೀಗೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಲ್ಲದೆ ಸೋಂಕನ್ನು ತಡೆಗಟ್ಟುವ ಸಾಮರ್ಥ್ಯವೂ ಹೆಚ್ಚುತ್ತದೆ.

ಅಡುಗೆ ಸೋಡಾ ಬೆರೆಸಿದ ನೀರು ದೇಹದಲ್ಲಿನ ಉರಿಯೂತಕ್ಕೂ ಶಮನ ನೀಡುತ್ತದೆ. ಒಂದು ವೇಳೆ ಶೀತದಿಂದ ಬಳಲುತ್ತಿದ್ದರೆ,ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ಚಿಕ್ಕಚಮಚ ಅಡುಗೆ ಸೋಡಾ,ಅರ್ಧ ನಿಂಬೆರಸ ಬೆರೆಸಿ ಮಿಶ್ರಣ ಮಾಡಿ ಕುಡಿಯಿರಿ ಶೀತ ನೆಗಡಿ ಕಡಿಮೆಯಾಗುತ್ತದೆ. ಮನೆಯಲ್ಲಿರುವ ರೆಫ್ರಿಜರೇಟರನ್ನು ತೊಳೆಯಲು ಉಪಯೋಗಿಸಬಹುದು.

ಇಷ್ಟೆಲ್ಲ ಆರೋಗ್ಯಕಾರಿ ಗುಣಹೊಂದಿರುವ ಅಡುಗೆ ಸೋಡಾ ಹೆಚ್ಚಿನವರ ಕಣ್ಣಿಗೆ ಬೀಳುವುದೇ ಇಲ್ಲ. ಹಿಂದಿನ ಕಾಲದಲ್ಲಿ ಬಹಳಷ್ಟು ಸಂದರ್ಭ ಮನೆ ಮದ್ದಿನಿಂದಲೇ ತಮಗೆ ಬಂದಿರುವ ಚಿಕ್ಕಪುಟ್ಟ ರೋಗವನ್ನು ವಾಸಿ ಮಾಡಿಕೊಳ್ಳುತ್ತಿದ್ದರು.

(ಸಂಗ್ರಹ)

LEAVE A REPLY

Please enter your comment!
Please enter your name here