ಬಾಯಿ ದುರ್ನಾತ,ದುರ್ವಾಸನೆ ಒಂದಲ್ಲ ಒಂದು ಬಾರಿ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ.ಧೂಮಪಾನಿಗಳು ಮದ್ಯ,ಮಾಂಸ ಸೇವಿಸುವವರ ಬಾಯಿ ಮಾತ್ರ ಮೋರಿ ವಾಸನೆಯಂತೆ ದುರ್ನಾತ ಬೀರುತ್ತದೆ ಎಂದು ಮೂಗು ಮುಚ್ಚಿಕೊಳ್ಳುವವರು ಸ್ವಲ್ಪ ತಮ್ಮ ಬಾಯೆಂಬ ಬ್ರಹ್ಮಾಂಡವನ್ನು ನೋಡಿಕೊಳ್ಳುವುದೊಳಿತು.

ಬಾಯಿ ದುರ್ನಾತಕ್ಕೆ ಅನೇಕ ಪರಿಹಾರ ಉಪಾಯಗಳಿದ್ದು,ಸರಳ ಹಾಗೂ ಸುಲಭ ವಿಧಾನಗಳಿಂದ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಾಗಿದೆ.ಬಾಯಿ ದುರ್ವಾಸನೆ ಬಾರದಂತೆ ತಡೆಗಟ್ಟುವುದು ಕೂಡಾ ಅತಿ ಮುಖ್ಯ.

ಬಾಯಿ ದುರ್ನಾತ ತಡೆಯಲು,ನಿವಾರಿಸಲು ಸರಳ ವಿಧಾನಗಳು:

ದಿನ ಬೆಳಗೆದ್ದು ನೀನು ಬಾಯಿ ಬಿಟ್ಟು ಆಕಳಿಸಿದರೆ ಸಾಕು,ಬಾಯಿಯ ವಾಸನೆ ಮಾಮೂಲಾಗಿರುತ್ತದೆ.ಇದನ್ನು ತಪ್ಪಿಸಲು ಬಳಸಿದ ಮೊದಲ ವಿಧಾನ ಹಲ್ಲುಜ್ಜುವುದು. ದಿನನಿತ್ಯ ಎರಡು ಬಾರಿ ಬ್ರಷ್ (ಸಾಧ್ಯವಾದಷ್ಟು ಸಾಫ್ಟ್ ಅಥವಾ ಸೆಮಿ ಸಾಫ್ಟ್ ಬ್ರಷ್ ಬಳಸಿ) ಮಾಡಿ

ಬಾಯಿ ಮುಕ್ಕಳಿಸಬೇಕು.

ಆಹಾರ ಸೇವನೆ ನಂತರ,ರಾತ್ರಿ ಮಲಗುವ ಮುನ್ನ ಬಾಯಿ ಮುಕ್ಕಳಿಸುವುದನ್ನು ಮರೆಯಬೇಡಿ.ಅದರಲ್ಲೂ ಹಲ್ಲು ಹುಳುಕು ಇದ್ದವರಿಗೆ ಬಾಯಿ ಮುಕ್ಕಳಿಸುವುದು ಕಡ್ಡಾಯ.

ಶುದ್ಧ ನೀರಿನಿಂದ ಬಾಯಿ ಮುಕ್ಕಳಿಸುವುದನ್ನು ರೂಢಿ ಮಾಡಿಕೊಳ್ಳಿ.ಉಗುರು ಬೆಚ್ಚಗಿನ ನೀರಿನ ಜೊತೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು ಹಲ್ಲು,ಬಾಯಿ ಹಾಗೂ ಗಂಟಲು ಸ್ವಚ್ಛತೆಗೆ ಅನುಕೂಲ.

ಇಲ್ಲದಿದ್ದರೆ ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗುವ ರೆಡಿಮೇಡ್ ಮೌಥ್ ವಾಷ್ ಗಳನ್ನು ಬಳಸಬಹುದು.ಆದರೆ,ಹೆಚ್ಚು ಕೆಮಿಕಲ್ ಹಾಗೂ ಆಲ್ಕೋಹಾಲ್ ಯುಕ್ತ ಮೌಥ್ ವಾಷ್ ಬಳಸಬೇಡಿ.

ಸೂರ್ಯಕಾಂತಿ ಬೀಜಗಳು ಬಾಯಿ ದುರ್ನಾತ ತೊಳಗಿಸಲು ತುಂಬಾ ಉಪಯುಕ್ತವಾಗಲಿದೆ.ಅದರಲ್ಲೂ ನಾನ್ ವೆಜ್ ತಿನ್ನುವವರು ಸ್ವಲ್ಪ ಸೂರ್ಯಕಾಂತಿ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಅಗೆದು,ನೀರು ಕುಡಿದರೆ ಸಾಕು.ದುರ್ಗಂಧ ದೂರವಾಗುತ್ತದೆ.

ದಿನಕ್ಕೊಂದು ಸೇಬು ಬಳಸಿದರೆ ವೈದ್ಯರನ್ನು ದೂರವಿಡಬಹುದು ಎಂದು ಮಾತು ನಿಜ. ಸೇಬು ಹಣ್ಣು ತಿನ್ನುವುದರಿಂದ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಬಾಯಿ ಸ್ವಚ್ಛವಾಗುತ್ತದೆ.

ನಿಂಬೆ ಹಣ್ಣು ತುಂಬಾ ಪರಿಣಾಮಕಾರಿಯಾಗಬಲ್ಲುದು.ನಿಂಬೆ ರಸವನ್ನು ಬಿಸಿ ನೀರಿನೊಂದಿಗೆ ಸೇವಿಸಿ ಬಾಯಿ ಗಳಗಳ ಮಾಡುತ್ತಾ ಬಂದರೆ,ಬಾಯಿ ದುರ್ವಾಸನೆ ನಾಶವಾಗಿ ಹೊಸ ಆಹ್ಲಾದ ಮೂಡುತ್ತದೆ.ಇದಕ್ಕಿಂತ ಉತ್ತಮ ಮನೆಮದ್ದು ಇಲ್ಲ ಎನ್ನಬಹುದು.

ಬಾಯಿ ದುರ್ನಾತ ತೊಲಗಿಸಿ, ಸುವಾಸನೆ ಬೀರುವಂತೆ ಮಾಡಲು ಒಂದೆರಡು ಏಲಕ್ಕಿ ಎಸಳುಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುತ್ತಾ ಇರಿ.ಏಲಕ್ಕಿ ಅಗಿಯುವುದರಿಂದ ಮೈ ಕೂಡಾ ಬೆಚ್ಚಗಾಗುತ್ತದೆ.ಅಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ಮೌಥ್ ರಿಫ್ರೆಷ್ ನರ್ ಗಿಂತ ನೈಸರ್ಗಿಕವಾದ ಏಲಕ್ಕಿ ಸೇವನೆ ಉತ್ತಮ.

ಮಿಂಟ್,ಪುದೀನ ಬರಿತ ಕ್ಯಾಂಡಿಗಳು,ಈರುಳ್ಳಿ,ಕರಿಬೇವು ಮುಂತಾದವುಗಳನ್ನು ಸೇವಿಸಿ ಧೂಮಪಾನಿಗಳು ತಮ್ಮ ಚಟದಿಂದ ಇತರರಿಗೆ ಉಂಟಾಗುವ ಮುಜುಗರ, ತೊಂದರೆಗಳನ್ನು ತಪ್ಪಿಸಲು ಹೆಣಗುತ್ತಾರೆ.

ಬಾಯಿ ದುರ್ನಾತ ತಡೆಗಟ್ಟುವುದು ಹೇಗೆ?:

ಅತ್ಯಂತ ಸರಳ ವಿಧಾನವೆಂದರೆ ಸಾಕಷ್ಟು ನೀರು ಕುಡಿಯುವುದು.ಬಾಯಿ ದುರ್ವಾಸನೆಗೆ ಮುಖ್ಯ ಕಾರಣವಾದ ಬ್ಯಾಕ್ಟೀರಿಯಾವನ್ನು ಕೊಲ್ಲಲು ನೀರಿಗಿಂತ ಪ್ರಬಲ ಅಸ್ತ್ರ ಮತ್ತೊಂದಿಲ್ಲ.ಬಿಸಿ ನೀರು ಸೇವನೆ ಕೂಡಾ ಒಳ್ಳೆಯದು.

ಬಾಯಿ ಸ್ವಚ್ಛತೆಯಲ್ಲಿ ಪ್ರಮುಖವಾಗಿ ದಿನಕ್ಕೆರಡು ಬಾರಿ ಹಲ್ಲುಜ್ಜುವುದು ಎಷ್ಟು ಮುಖ್ಯವೋ, ನಾಲಗೆ ಸ್ವಚ್ಛತೆಯೂ ಮುಖ್ಯ.ನಾಲಗೆ ಸ್ವಚ್ಛಗೊಳಿಸಲು ಕೆಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅವುಗಳ ಬಳಕೆ ಭಾರತೀಯರಲ್ಲಿ ತುಂಬಾನೇ ಕಮ್ಮಿ.

ಆದರೂ, ಕೈ ಬೆರಳುಗಳ ಸಹಾಯದಿಂದ ನಾಲಗೆ ಒಂದೆರಡು ಬಾರಿ ತಿಕ್ಕಿ,ನೀರು ಹಾಕಿಕೊಂಡು ಬಾಯಿ ಮುಕ್ಕಳಿಸುವುದು ಸರಳ ವಿಧಾನ.ಹಲ್ಲುಜ್ಜಿದ ನಂತರ ತೋರು ಬೆರಳನ್ನು ಬ್ರಷ್ ನಂತೆ ಬಳಸಿ ಒಸಡುಗಳನ್ನು ಉಜ್ಜುವುದರಿಂದ ಒಸಡುಗಳಲ್ಲಿ ರಕ್ತ ಸಂಚಾರ ಹೆಚ್ಚಿ,ಹಲ್ಲುಗಳನ್ನು ಇನ್ನಷ್ಟು ಬಿಗಿಯಾಗಿ ಹಿಡಿದುಕೊಳ್ಳುತ್ತವೆ.

ದುಶ್ಚಟಗಳ ಸಹವಾಸವಿಲ್ಲದವರೂ ಕೂಡಾ ಬಾಯಿ ದುರ್ನಾತಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ.

ಹುಳುಕು ಹಲ್ಲು ಇದ್ದರೆ ಮೊದಲು ಸರಿಪಡಿಸಿಕೊಳ್ಳಿ.ಕಾಫಿ ಸೇವನೆ ಚಟವುಳ್ಳವರು ಕಾಫಿಗಿಂತ ಟೀ ಸೇವಿಸುವುದು ಒಳ್ಳೆಯದು.ಬಾಯಿ ದುರ್ನಾತ ತಡೆಗೆ ಚಹಾ ಸಹಕಾರಿ ಎಂದು ತಜ್ಞರು ಹೇಳುತ್ತಾರೆ.ಆದರೆ,ಚಹಾ ಪುಡಿ ಕಲಬೆರಕೆ ವ್ಯಾಪಕವಾಗಿರುವ ಕಾರಣ, ಕಾಫಿ ಇರಲಿ,ಟೀ ಇರಲಿ ಕುಡಿದ ನಂತರ ಬಾಯಿ ಮುಕ್ಕಳಿಸುವುದು ಒಳ್ಳೆಯದು.

ಆಗಾಗ ಸಕ್ಕರೆ ಅಂಶ ಕಮ್ಮಿಯಿರುವ ಚ್ಯೂಯಿಂಗ್ ಗಮ್ ತಿನ್ನಬಹುದು.ಬಾಯಿಯನ್ನು ಎಂಜಲು ಪ್ರಮಾಣ ಹೆಚ್ಚಿಸಿ,ಬಾಯಿ ದುರ್ವಾಸನೆ ಹೊಗಲಾಡಿಸಲು ಇದು ಸಹಾಯಕಾರಿ.

ಬಬ್ಬಲ್ ಗಮ್,ಚ್ಯೂಯಿಂಗ್ ಗಮ್ ಅಗಿಯುವುದನ್ನೇ ಚಟ ಮಾಡಿಕೊಳ್ಳಬೇಡಿ. ಇನ್ನೂ ಹಲ್ಲು ಹುಳುಕು ಇದ್ದವರು ಚಾಕಲೋಟ್,ಸಿಹಿ ಪದಾರ್ಥ ಸೇವಿಸಬಾರದು ಎಂದರೆ ಕ್ಲೀಷೆಯಾದೀತು.

ಈ ಎಲ್ಲಾ ಉಪಾಯಗಳು ವಿಫಲವಾದರೆ,ಕೂಡಲೇ ವೈದ್ಯರನ್ನು ಕಾಣುವುದು ಉತ್ತಮ ಅದರಲ್ಲೂ ಪಾನ್ ಬೀಡಾ ಹಾಕುವ ಚಟ ಉಳ್ಳವರು,ಧೂಮಪಾನಿಗಳು,ಮದ್ಯಪಾನಿಗಳು ಅಗ್ಗಿಂದಾಗ್ಗೆ ವೈದ್ಯರನ್ನು ಕಾಣಲೇಬೇಕು.

ಇಷ್ಟಲ್ಲದೆ,ಇನ್ನೂ ಅನೇಕಾನೇಕ ವಿಧಾನಗಳನ್ನು ಜನ ಬಳಸುತ್ತಿರಬಹುದು.ನಿಮ್ಮ ಸ್ನೇಹಿತರಿಗೆ ಬಾಯಿ ದುರ್ವಾಸನೆ ಇದ್ದರೆ ಮೂಗು ಮುಚ್ಚಿಕೊಳ್ಳಬೇಡಿ.ಮೇಲಿನ ಸಲಹೆ ತಿಳಿಸಿ.

LEAVE A REPLY

Please enter your comment!
Please enter your name here