ಹೊಳೆಯುವ ಈ ಹಣ್ಣು ನೋಡಿದಾಕ್ಷಣ ಎಂಥವರಿಗೂ ತಿನ್ನುವ ಆಸೆಯಾಗುತ್ತದೆ,ಒಗರು ಒಗರು ಎನಿಸಿದರೂ ಬಾಯಿಗೆ ಇಟ್ಟೊಡನೆ ಇಷ್ಟವಾಗುತ್ತದೆ.ನಾಲಿಗೆಯ ಬಣ್ಣ ನೀಲಿಯಾಗುವುದನ್ನು ನೋಡಿ ಮಕ್ಕಳೂ ಇಚ್ಛಿಸುವ,ತಿರುಳು ಕಂಡು ವೈನ್‌ಪ್ರಿಯರೂ ಬಾಯಲ್ಲಿ ನೀರೂರಿಸುವ ಈ ಹಣ್ಣೇ ನೇರಳೆ.

ನೀರ್ಲಣ್ಣು, ನೇರ್ಲಣ್ಣು, ನೀರಲು ಎಂದು ಪರಿಚಿತವಾಗಿರುವ ಈ ಹಣ್ಣಿನ ಮೂಲ ಭಾರತ ಸೇರಿದಂತೆ ಪಾಕಿಸ್ತಾನ ಹಾಗೂ ಇಂಡೋನೇಷಿಯ.ಆದರೆ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳಲ್ಲೂ ಇವು ಕಂಡು ಬರುತ್ತವೆ.ಈ ಹಣ್ಣಿನ ಮರಗಳನ್ನು ಹೆಚ್ಚಾಗಿ ನೆರಳಿಗಾಗಿ ರಸ್ತೆ ಬದಿಗಳಲ್ಲಿ ನೆಡುವ ರೂಢಿಯುಂಟು.

ನೇರಳೆ ಹಣ್ಣು ಮಾತ್ರವಲ್ಲದೇ, ಈ ಹಣ್ಣಿನ ಗಿಡ, ಬೇರು, ಎಲೆ, ಬೀಜ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಹಲವಾರು ಕಾಯಿಲೆಗಳನ್ನು, ದಿನನಿತ್ಯ ಕಾಣುವ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಚಮತ್ಕಾರೀಯ ಗುಣಗಳನ್ನು ಇದು ಹೊಂದಿದೆ. ಅವುಗಳ ಪೈಕಿ ಕೆಲವು ಉಪಯೋಗಗಳನ್ನು ಇಲ್ಲಿ ನೀಡಲಾಗಿದೆ.

ಮಧುಮೇಹಿಗಳಿಗೆ ಅನೇಕ ಹಣ್ಣಿನ ಸೇವನೆ ವರ್ಜ್ಯ.ಆದರೆ ನೇರಳೆ ಹಣ್ಣು ಮಧುಮೇಹ ನಿಯಂತ್ರಣಕ್ಕೆ ತುಂಬಾ ಒಳ್ಳೆಯದು.ಹಣ್ಣಷ್ಟೇ ಅಲ್ಲದೇ ಹಣ್ಣಿನ ಬೀಜಗಳೂ ಅಷ್ಟೇ ಆರೋಗ್ಯಕಾರಿ. ಬೀಜಗಳನ್ನು ಒಣಗಿಸಿ ಪುಡಿ ಮಾಡಿ ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸುತ್ತಾ ಬಂದರೆ ಸಕ್ಕರೆ ಕಾಯಿಲೆಯನ್ನು ತಕ್ಕಮಟ್ಟಿಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಜೇನು ತುಪ್ಪದ ಜೊತೆ ನೇರಳೆ ಹಣ್ಣಿನ ರಸವನ್ನು ಸೇವಿಸಿದರೆ ಮೂಲವ್ಯಾಧಿ ಸಮಸ್ಯೆಯಿಂದ ಮುಕ್ತವಾಗಬಹುದು.ಎಲೆ ಹಾಗೂ ಹಣ್ಣಿನ ತಿರುಳನ್ನು ಜಜ್ಜಿ ಇದರಿಂದ ಜ್ಯೂಸ್‌ ತಯಾರಿಸಿ ಸೇವಿಸಿದರೆ ಭೇದಿ ನಿಯಂತ್ರಣಕ್ಕೆ ಬರುತ್ತದೆ. ರಕ್ತಸ್ರಾವವಿದ್ದ ಮೂಲವ್ಯಾಧಿಗೆ ಈ ಹಣ್ಣು ಬಹಳ ಒಳ್ಳೆಯದು.

ಕೆಲವರಿಗೆ ಋತುಸ್ರಾವದ ಸಮಯದಲ್ಲಿ ಅಧಿಕ ರಕ್ತ ಹೋಗುತ್ತದೆ. ಅಂಥ ಸಮಸ್ಯೆಯಿಂದ ಬಳಲುವವರು ನೇರಳೆ ಹಣ್ಣಿನ ಮರದ ತೊಗಟೆಯ ಚೂರ್ಣವನ್ನು ಸೇವಿಸುತ್ತಾ ಬರಬೇಕು.

ಚಿಕ್ಕ ಮಕ್ಕಳಿಗೆ ಡಯೇರಿಯಾ ಸಮಸ್ಯೆ ಉಂಟಾದರೆ ನೇರಳೆ ಮರದ ತೊಗಟೆಯ ರಸವನ್ನು ಆಡಿನ ಹಾಲಿನೊಂದಿಗೆ ಬೆರೆಸಿ ಕುಡಿಸಬೇಕು.

ನೇರಳೆ ಹಣ್ಣಿನ ಬೀಜದಲ್ಲಿ ಪ್ರೊಟೀನ್, ಕಾರ್ಬೊ ಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳು ಇವೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಸಿಹಿಮೂತ್ರ ಕಾಯಿಲೆ ಕಡಿಮೆಯಾಗುತ್ತದೆ.

ಕೆಲವರದ್ದು ಅಧಿಕ ಉಷ್ಣ ದೇಹ ಪ್ರಕೃತಿ.ಅಂಥವರಿಗೆ ಬಾಯಿ ಹುಣ್ಣು ಸಾಮಾನ್ಯ. ನೇರಳೆ ಮರದ ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

ಬಾಯಿ ಸದಾ ದುರ್ಗಂಧ ಬೀರುತ್ತಿದ್ದರೆ  ನೇರಳೆ ಮರದ ತೊಗಟೆಯ ಕಷಾಯ ಮಾಡಿ ಕುಡಿಯುತ್ತಿದ್ದರೆ ಸಮಸ್ಯೆಯಿಂದ ಪಾರಾಗಬಹುದು.

ಈ ಕಷಾಯವು ಗಂಟಲು ನೋವು,ಗೊರಲು, ಉಬ್ಬಸ ಮುಂತಾದ ನೋವುಗಳಿಗೂ ರಾಮಬಾಣ.ನೇರಳೆ ಹಣ್ಣಿನ ರಸ ಮಾಡಿ ಕುಡಿದರೆ ದೇಹವನ್ನು ತಂಪಾಗಿ ಇರಿಸಿಕೊಳ್ಳಬಹುದು.

ರಸದ ಸೇವನೆಯಿಂದ ಮುಖದ ಕಾಂತಿ ಮತ್ತು ಮೈ ಅಂದ ಹೆಚ್ಚುತ್ತದೆ.ನೇರಳೆ ಮರದ ಎಲೆಗಳನ್ನು ಚೆನ್ನಾಗಿ ಜಗಿಯುತ್ತ ಬಂದರೆ ಹಲ್ಲುಗಳು ಸದೃಢವಾಗುವುದು ಮಾತ್ರವಲ್ಲದೇ ಹಲ್ಲುಗಳಿಗೆ ಹೊಳಪು ಬರುತ್ತದೆ.

ಇತರ ಉಪಯೋಗಗಳು
ನೇರಳೆ ಹಣ್ಣು, ಮರಗಳನ್ನು ಆರೋಗ್ಯಕ್ಕಾಗಿ ಮಾತ್ರವಲ್ಲದೇ ಹಲವು ಕಾರಣಗಳಿಗೂ ಬಳಸಲಾಗುತ್ತದೆ.ಇದರ ಮರವನ್ನು ಉರುವಲಿಗಾಗಿ ಹಾಗೂ ಬೇಸಾಯದ ಉಪಕರಣಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.ತಿರುಳನ್ನು ವೈನ್‌ ಬಳಕೆಗೆ ಉಪಯೋಗಿಸುತ್ತಾರೆ.

ತೊಗಟೆಯನ್ನು ಚರ್ಮ ಹದ ಮಾಡಲು ಹಾಗೂ ಬಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ.
ಇದರ ಎಲೆಗಳನ್ನು ಮೇವಾಗಿ ಬಳಸುತ್ತಾರೆ.
ಇದರ ಎಲೆಗಳನ್ನು ಬಟ್ಟಿ ಇಳಿಸಿ ಹಸಿರಾದ ಹೊಳಪುಳ್ಳ ಎಣ್ಣೆಯನ್ನು ತೆಗೆಯುತ್ತಾರೆ.

LEAVE A REPLY

Please enter your comment!
Please enter your name here