ಬಾಳೆಹಣ್ಣು ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಮಾತ್ರವಲ್ಲ, ಇದು ಒಂದು ಉತ್ತಮ ಸೌಂದರ್ಯವರ್ಧಕವೂ ಆಗಿದೆ….

ಸಾಮಾನ್ಯವಾಗಿ ವರ್ಷದ ಎಲ್ಲಾ ದಿನಗಳಲ್ಲಿ, ಎಲ್ಲೆಡೆ ಯಥೇಚ್ಛವಾಗಿ ಮತ್ತು ಅತಿ ಅಗ್ಗವಾಗಿ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಅಗ್ಗ ಎಂಬ ಕಾರಣಕ್ಕೆ ಹೆಚ್ಚಿನವರ ಅವಗಣನೆಗೆ ತುತ್ತಾಗಿರುವ ಈ ಹಣ್ಣು ಒಂದು ಅದ್ಭುತಗಳ ಆಗರವೇ ಆಗಿದೆ.

ಈ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಮಾತ್ರವಲ್ಲ, ಇದು ಒಂದು ಉತ್ತಮ ಸೌಂದರ್ಯವರ್ಧಕವೂ ಆಗಿದೆ. ಬನ್ನಿ, ಈ ಹಣ್ಣಿನ ಐದು ಅತ್ಯುತ್ತಮ ಸೌಂದರ್ಯವರ್ಧಕ ಗುಣಗಳನ್ನು ನೋಡೋಣ….

ಚೆನ್ನಾಗಿ ಕಳಿತ ಬಾಳೆಹಣ್ಣು….

ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇರುವ ಕಾರಣ ಇದೊಂದು ಉತ್ತಮ ತೇವಕಾರಕವಾಗಿದ್ದು ಚರ್ಮಕ್ಕೆ ಅತ್ಯುತ್ತಮ ಆರೈಕೆ ನೀಡುತ್ತದೆ. ಇದಕ್ಕಾಗಿ ಅರ್ಧ ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಕಿವುಚಿ ದಪ್ಪನೆಯ ಲೇಪನ ತಯಾರಿಸಿ.

ಸಾಮಾನ್ಯ ಮತ್ತು ಎಣ್ಣೆಚರ್ಮಕ್ಕೆ ಹಣ್ಣಿನ ತಿರುಳನ್ನು ನೇರವಾಗಿ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಒಣ ಚರ್ಮದವರು ಬಾಳೆಹಣ್ಣಿನೊಂದಿಗೆ ಕೊಂಚ ಜೇನನ್ನು ಬೆರೆಸಬೇಕು.ಬಾಳೆಹಣ್ಣಿನ ತಿರುಳಿನ ಜೊತೆಗೆ ಇದರ ಸಿಪ್ಪೆ ಸಹಾ ಪ್ರಯೋಜನಕಾರಿಯಾಗಿದೆ. ಇದರಲ್ಲಿಯೂ ಉತ್ತಮ ಆಂಟಿ ಆಕ್ಸಿಡೆಂಟುಗಳ ಗುಣವಿದ್ದು ಚರ್ಮಕ್ಕೆ ಉಪಯುಕ್ತವಾಗಿದೆ. ವಿಶೇಷವಾಗಿ ಮೊಡವೆಗಳ ನಿವಾರಣೆಗೆ ಈ ಗುಣ ಉತ್ತಮ ಪರಿಹಾರ ನೀಡುತ್ತದೆ.

ಮೊಡವೆ ಇದ್ದವರು ಚೆನ್ನಾಗಿ ಕಳಿತ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದ ನಾರುಗಳನ್ನು ಬೇರ್ಪಡಿಸಿ ನಯವಾಗಿ ಜಜ್ಜಿ ಲೇಪನ ತಯಾರಿಸಿ ದಪ್ಪನಾಗಿ ಹಚ್ಚಿಕೊಳ್ಳಬೇಕು.ಕೊಂಚ ಹೊತ್ತಿಗೆ ಈ ಲೇಪನ ಕಂದು ಬಣ್ಣಕ್ಕೆ ತಿರುಗುತ್ತದೆ.

ಬಳಿಕ ಇದನ್ನು ತಣ್ಣೀರಿನಿಂದ ತೊಳೆಯಬೇಕು. ಅಷ್ಟೇ ಅಲ್ಲ, ಮುಖದ ಕಲೆಗಳನ್ನು ಮತ್ತು ಗಾಯದ ಗುರುತುಗಳನ್ನು ನಿವಾರಿಸಲೂ ಈ ವಿಧಾನ ಸೂಕ್ತವಾಗಿದ್ದು ಶೀಘ್ರದಲ್ಲಿಯೇ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ. ಈ ವಿಧಾನವನ್ನು ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಪುನರಾವರ್ತಿಸಿ.

ಕಣ್ಣುಗಳ ಆರೈಕೆಗೆ

ಕಣ್ಣುಗಳ ಕೆಳಗಿನ ಭಾಗ ಊದಿಕೊಂಡಿದ್ದು ತುಂಬಿದ ಚೀಲದಂತೆ ಆಗಿದ್ದರೆ ಹೀಗೆ ಮಾಡಿ: ಚೆನ್ನಾಗಿ ಕಳಿತ ಬಾಳೆಹಣ್ಣಿನ ತಿರುಗಳನ್ನು ಜಜ್ಜಿ ಲೇಪನ ತಯಾರಿಸಿ ಕಣ್ಣುಗಳ ಕೆಳಭಾಗದಲ್ಲಿ ದಪ್ಪನಾಗಿ ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ದಿನಕ್ಕೊಂದು ಬಾರಿ ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಚೀಲ ಇಲ್ಲವಾಗುತ್ತದೆ.

ಪಾದಗಳ ಆರೈಕೆಗೂ

ಪಾದಗಳ ಆರೈಕೆಗೂ ಬಾಳೆಹಣ್ಣು ಸೂಕ್ತವಾಗಿದೆ. ಇದಕ್ಕಾಗಿ ಬಾಳೆಹಣ್ಣಿನ ತಿರುಳನ್ನು ಜಜ್ಜಿ ಲೇಪನ ತಯಾರಿಸಿ ಪಾದಗಳಿಗೆ ಹಚ್ಚಿ. ವಿಶೇಷವಾಗಿ ಬಿರುಕುಗಳಿರುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚಿ.ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಪಾದಗಳು ಮೃದುವಾಗಿ ಬಿರುಕುಗಳಿಲ್ಲದಂತಾಗುತ್ತದೆ.

ಕೂದಲು ಉದುರುವುದಕ್ಕೆ

ಕೂದಲು ಉದುರುವುದನ್ನು ತಡೆಗಟ್ಟಲು ಬಾಳೆಹಣ್ಣಿನ ತಿರುಳು ಮತ್ತು ಮೊಸರನ್ನು ಸಮಪ್ರಮಾನದಲ್ಲಿ ಬೆರೆಸಿ ದಪ್ಪನೆಯ ಲೇಪನ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಹದಿನೈದು ನಿಮಿಷದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.ಒಂದು ವೇಳೆ ನಿಮ್ಮ ಕೂದಲು ತೀರಾ ಒಣಗಿದ್ದರೆ ಈ ಲೇಪನದೊಂದಿಗೆ ಕೊಂಚ ಜೇನನ್ನು ಬೆರೆಸಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುವುದು ಮಾತ್ರವಲ್ಲ, ಕೂದಲು ಸೊಂಪಾಗಿ ಮತ್ತು ಕಾಂತಿಯುಕ್ತವಾಗಿ ಬೆಳೆಯಲೂ ಸಹಾಯವಾಗುತ್ತದೆ.

LEAVE A REPLY

Please enter your comment!
Please enter your name here