ರಾಗಿ ಹಿಟ್ಟಿನ ಆಹಾರಗಳು ಕರ್ನಾಟಕದ ಗ್ರಾಮೀಣ ಜನರ ಒಂದು ಮುಖ್ಯ ಆಹಾರ. ಶ್ರಮಜೀವಿಗಳು ಮತ್ತು ಗ್ರಾಮಾಂತರ ಪ್ರದೇಶಗಳ ಜನರು ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ. ರಾಗಿಹಿಟ್ಟಿನಿಂದ ತಯಾರಿಸುವ ಈ ಆಹಾರ ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ. “ಹಿಟ್ಟು ತಿಂದು ಗಟ್ಟಿಯಾಗು” ಎಂಬ ಗಾದೆ ರಾಗಿಮುದ್ದೆಯ ಮಹತ್ವವನ್ನು ಸಾರುತ್ತದೆ.

ರಾಗಿ ಹಿಟ್ಟಿನಿಂದ ಮಾಡಿದ ಮುದ್ದೆಯನ್ನು ಸೇವಿಸಿದರೆ,ಮಧುಮೇಹ ರೋಗ ಉಲ್ಬಣಗೊಳ್ಳುವುದಿಲ್ಲ.ಧಡೂತಿಗಳ ಬೊಜ್ಜನ್ನು ಕಡಿಮೆ ಮಾಡುವಂತೆ ಮಾಡುತ್ತದೆ. ಹುರಿದ ರಾಗಿ ಹಿಟ್ಟನ್ನು ಬೆಲ್ಲ ಮತ್ತು ಹುಣಿಸೇ ಸೊಪ್ಪಿನಲ್ಲಿ ಕದಡಿ ಕುಡಿದರೆ ಪಿತ್ತ ಶಾಂತಿಯಾಗುತ್ತದೆ.

ನೆಗಡಿಯನ್ನು ಹೋಗಲಾಡಿಸಲು ರಾಗಿ ಹಿಟ್ಟನ್ನು ಅರಿಶಿಣ ಪುಡಿಯೊಂದಿಗೆ ಬೆರೆಸಿ ಕೆಂಡದ ಮೇಲೆ ಸ್ವಲ್ಪ ಸ್ವಲ್ಪವೇ ಹಾಕಿದಾಗ ದಟ್ಟವಾದ ಹೊಗೆ ಏಳುತ್ತದೆ. ಈ ಹೊಗೆಯನ್ನು ಮೂಗಿನ ಮೂಲಕ ಆಘ್ರಾಣಿಸುವುದರಿಂದ ಅದು ಗುಣವಾಗುತ್ತದೆ. ಹಸಿರಾಗಿರುವ ತೆನೆಗಳನ್ನು ಕಿತ್ತು ತಂದು ಕೆಂಡದ ಮೇಲಿಟ್ಟು ಸುಟ್ಟ ನಂತರ ಕಾಳನ್ನು ಉಜ್ಜೆ ಉದುರಿಸಿ, ಆ ಕಾಳುಗಳಿಗೆ ಬೆಲ್ಲ, ಕೊಬ್ಬರಿ ಸೇರಿಸಿ ತಿಂದರೆ ಯಕೃತ್ ದೋಷ, ಹೃದ್ರೋಗ ಮತ್ತು ಮಧುಮೇಹ ರೋಗಗಳು ಗುಣವಾಗುತ್ತದೆ.ರಾಗಿಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು , ದೋಸೆ, ಗಂಜಿ, ಹಾಲ್ಬಾಯಿ (ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ.

ಮಕ್ಕಳ ಪೌಷ್ಟಿಕ ಆಹಾರವೆಂದರೆ- ಒಡ್ಡರಾಗಿಹಿಟ್ಟು. ಇದು ಅತ್ಯಂತ ವಿಟಮಿನ್-ಯುಕ್ತ ಆಹಾರ. ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ-ಮುಟ್ಟಾಗಿಯೂ ಇರುತ್ತಾರೆ. ರಾಗಿ ಮಾಲ್ಟನ್ನು ಸರಿಯಾಗಿ ಡಬ್ಬಿಗಳಲ್ಲಿ ಶೇಖರಿಸಿ ಮಾರುವು ಕಂಪೆನಿಗಳು ಚೆನ್ನಾಗಿ ಹಣ ಮಾಡುತ್ತಿವೆ.

ಮಧುಮೇಹ(ಡಾಯಾಬೆಟೆಸ್) ರೋಗಿಗಳಿಗೆ ಇದು ವೈದ್ಯರಿಂದ ಶಿಫಾರಿಸ್ ಪಡೆದ ಪೇಯ.ರಾಗಿ ಅರಳನ್ನು ಹುರಿದು, ಅದನ್ನು ನುಣ್ಣಗೆ ಬೀಸಿ ಪುಡಿಮಾಡಿ, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿಬೆರೆಸಿ, ಹುಣಸೆಹುಳಿ, ಯಾಲಕ್ಕಿ ಪುಡಿ ಸೇರಿಸಿ,ಸೇವಿಸಿದರೆ, ಬಹಳ ಚೆನ್ನಾಗಿರುತ್ತದೆ. ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ, ಸಕ್ಕರೆ ಅಥವಾ ಬೆಲ್ಲದ ಜೊತೆಯೂ ಸೇವಿಸಬಹುದು.

ರಾಗಿಯನ್ನು ಕಪ್ಪಾಗುವವರೆಗೆ ಹುರಿದು ನಂತರ ಕುಟ್ಟಿ ಪುಡಿ ಮಾಡಿ ನಂತರ ಮೆಣಸು, ಜೀರಿಗೆ, ಓಮು, ಶುಂಠಿ, ಅಡುಗೆ ಉಪ್ಪಿನ ಪುಡಿ ಸೇರಿಸಿ ಪುಡಿ ಮಾಡಿಕೊಂಡು ಪ್ರತಿ ದಿನ ಹಲ್ಲುಜ್ಜಿದರೆ ಹಲ್ಲುಗಳು ದೃಢವಾಗುತ್ತವೆ.ನೆನೆಸಿದ ರಾಗಿಯ ಹಾಲನ್ನು ತೆಗೆದು ಅದನ್ನು ಕಾಯಿಸಿ ನಂತರ ಲವಂಗ, ದಾಲ್ಚಿನ್ನಿ, ಏಲಕ್ಕಿ, ಹಾಲು ಮತ್ತು ಸಕ್ಕರೆ ಬೆರೆಸಿಕೊಂಡು ಕುಡಿದರೆ ಬೆಳವಣೆಗೆ ಚೆನ್ನಾಗಿ ಆಗುತ್ತದೆ.ರಾಗಿ ಮಾಲ್ಟ್ ಕೂಡ ಒಂದು ಆರೋಗ್ಕಕರ ಪೇಯ.

LEAVE A REPLY

Please enter your comment!
Please enter your name here