ಚಕ್ಕುಲಿ ತಯಾರಿಗೆ ಸಾಂಪ್ರದಾಯಿಕವಾಗಿ ಬೇಕಾಗಿರುವುದು ಉದ್ದು ಹಾಗೂ ಅಕ್ಕಿ.  ಒಂದು ಕಪ್ ಉದ್ದು ಹಾಗೂ ಮೂರು ಕಪ್ ಅಕ್ಕಿ.ಉದ್ದು ಹುರಿದು ನುಣುಪಾದ ಹುಡಿಯಾಗಿರಬೇಕು, ಅಕ್ಕಿಯೂ ಅಷ್ಟೇ ನುಣ್ಣಗೆ ಹುಡಿಯಾಗಿರಬೇಕು.ಅಕ್ಕಿಯನ್ನು ಹುರಿದುಕೊಂಡಲ್ಲಿ ಚಕ್ಕುಲಿ ಹೆಚ್ಚು ಗರಿಗರಿಯಾಗಿರುತ್ತದೆ.

ರುಚಿಗೆ ಉಪ್ಪು,ಖಾರ ಹಾಗೂ ಜೀರಿಗೆ,ಎಳ್ಳು,ಬೇಕಿದ್ದರೆ ಬೆಣ್ಣೆ ತುಸು ಹಾಕಿ ಒಂದು ಕಪ್ ನೀರಿನಲ್ಲಿ ಗಟ್ಟಿಯಾಗಿ ಚಪಾತಿ ಹಿಟ್ಟಿನಂತೆ ಕಲಸಿಟ್ಟು ಚಕ್ಕುಲಿ ಒರಲಿನಲ್ಲಿ ಒತ್ತಿ ಎಣ್ಣೆಯಲ್ಲಿ ಕರಿದು ತೆಗೆದರಾಯಿತು.

ಕೆಲವು ಚಕ್ಕಲಿ ಒರಲುಗಳಲ್ಲಿ ಎಳ್ಳು, ಜೀರಿಗೆಗಳು ತೂತಿಗೆ ಅಡ್ಡವಾಗಿ ನಿಂತು ಸರಾಗವಾಗಿ ಚಕ್ಕುಲಿಯ ಎಳೆ ಬಾರದಂತೆ ತಡೆಯೂಡ್ಡುತ್ತವೆ,ಅಂಥಲ್ಲಿ ಸಾರಿನ ಹುಡಿ,ಖಾರಾಪುಡಿ ಹಾಕಿಕೊಳ್ಳಿ.ಅಕ್ಕಿ ಹಾಗೂ ಉದ್ದಿನ ಹುಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಕಲಸಿದ ಹಿಟ್ಟು ಹೇಗಿರಬೇಕು?
ಅಂಗೈಯಲ್ಲಿ ನೆಲ್ಲಿಗಾತ್ರದಷ್ಟು ಹಿಟ್ಟನ್ನು ಬತ್ತಿಯಂತೆ ಹೊಸೆಯಿರಿ.ಉದ್ದವಾಗಿ ಬಳ್ಳಿಯಂತೆ ಇಳಿಯುವ ಹಿಟ್ಟು ತುಂಡಾಗದಿದ್ದಲ್ಲಿ ಸರಿಯಾಗಿದೆ ಎಂದೇ ತಿಳಿಯಿರಿ.ಚಕ್ಕುಲಿ ಒರಲಿನೊಳಗೆ ಹಿಡಿಸುವ ಗಾತ್ರದ ಉಂಡೆ ಮಾಡಿ ಪಾಲಿಥೀನ್ ಹಾಳೆ ಮೇಲೆ ಜಿಡ್ಡು ಸವರಿ ಒತ್ತಿ ಇಟ್ಟುಕೊಳ್ಳಿ.

ಎಣ್ಣೆ ಬಿಸಿಯಾಗಿದೆಯಾ,ತಿಳಿಯುವುದು ಹೇಗೆ?
ಚಿಕ್ಕ ಕಡ್ಳೇ ಗಾತ್ರದ ಹಿಟ್ಟನ್ನು ಎಣ್ಣೆಗೆ ಹಾಕಿ ನೋಡಿ,ಮೇಲೆ ತೇಲಿ ಬಂತೇ,ಎಣ್ಣೆ ಕಾದಿದೆ.  ಬಾಣಲೆ ದಪ್ಪವಾಗಿರಬೇಕು,ಅರ್ಧಕ್ಕಿಂತ ಹೆಚ್ಚು ಎಣ್ಣೆ ಎರೆಯಬಾರದು,ಉರಿ ಕೂಡಾ ಸಮಪ್ರಮಾಣದಲ್ಲಿರಬೇಕು.ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮಾಡುವಾಗ ಸಾಕಷ್ಟು ಮುಂಜಾಗ್ರತೆ ಅವಶ್ಯ.

ಕಾದ ಎಣ್ಣೆಗೆ ಒಂದೊಂದಾಗಿ ಇಳಿಸಿ.ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ ಬಿಡಿ.ಅರ್ಧ ಬೆಂದಾಗ ಮಗುಚಿ ಹಾಕಿ.ಹೊಂಬಣ್ಣ ಬಂದಾಗ ಕಣ್ಣುಸಟ್ಟುಗದಲ್ಲಿ ತೆಗೆದು ತೂತಿನ ಪಾತ್ರೆಗೆ ಹಾಕಿ.ಚೆನ್ನಾಗಿ ಆರಿದ ಮೇಲೆ ಡಬ್ಬಾದಲ್ಲಿ ತುಂಬಿಸಿ.ಮಕ್ಕಳಿಗೆ ಕೊಟ್ಟು ನೀವೂ ತಿನ್ನಿ.

ಕೋಡುಬಳೆ ಮಾಡುವ ವಿಧಾನಕ್ಕಾಗಿ ಈ ವೀಡಿಯೋ ನೋಡಿರಿ…

LEAVE A REPLY

Please enter your comment!
Please enter your name here